ದೂತಕಾವ್ಯಗಳು -
ವಿರಹಿಯಾದ ಪ್ರಿಯನೊಬ್ಬ ದೂರದೇಶದಲ್ಲಿರುವ ಅವನ ಪ್ರೇಯಸಿಗೆ ತನ್ನ ವಿರಹವೇದನಾವಾರ್ತೆಯ ಸಂದೇಶವನ್ನು ದೂತನೊಬ್ಬನ ಮೂಲಕ ಕಳುಹಿಸುವ ವಸ್ತುವುಳ್ಳ ಕಾವ್ಯ ದೂತಕಾವ್ಯವೆನ್ನಿಸುತ್ತದೆ. ಇದನ್ನೇ ಸಂದೇಶಕಾವ್ಯವೆಂದೂ ಕರೆಯುತ್ತೇವೆ. ಸಂಸ್ಕøತ ಸಾಹಿತ್ಯದಲ್ಲಿ ಇಂಥ ಕಾವ್ಯಗಳು ಹೇರಳವಾಗಿವೆ. ಇವೆಲ್ಲವೂ ಒಂದೆರಡು ಸರ್ಗಗಳ ತುಂಡುಕಾವ್ಯಗಳು. ಪ್ರಾಚೀನ ಲಾಕ್ಷಣಿಕರು ಈ ಬಗೆಯ ಕಾವ್ಯಗಳನ್ನು ಖಂಡಕಾವ್ಯಗಳೆಂದು ನಿರ್ದೇಶಿಸಿದ್ದಾರೆ. ನವೀನರ ದೃಷ್ಟಿಯಲ್ಲಿ ಇವು ಒಂದು ರೀತಿಯ ಭಾವಗೀತೆಗಳು.

	ಈ ಕಾವ್ಯಗಳಲ್ಲಿ ಎದ್ದುಕಾಣುವುದು ವಿರಹಿಯ ತೀವ್ರವೇದನೆ ಮತ್ತು ಅದರ ಪರಿಣಾಮವಾದ ಉನ್ಮಾದಾವಸ್ಥೆಯಲ್ಲಿ ಆತ ವಿವೇಕಶೂನ್ಯನಾಗಿ ತನ್ನೆದುರಿಗೆ ಕಂಡ ಪಶುವನ್ನೋ ಪಕ್ಷಿಯನ್ನೋ ತರುಲತಾದಿಗಳನ್ನೋ ಮೇಘಾದಿ ಅಚೇತನವಸ್ತುವನ್ನೋ ತನ್ನ ಸಂದೇಶದ ವಾಹಕನನ್ನಾಗಿ (ದೂತ) ಆರಿಸಿಕೊಂಡು ಅದನ್ನು ಸಂಭೋಧಿಸಿ ಮನಕರಗುವಂತೆ ತನ್ನ ಮನೋಗತವೆಲ್ಲವನ್ನೂ ತೋಡಿಕೊಳ್ಳುವುದು. ಈ ಬಗೆಯ ಪ್ರಸಂಗಗಳನ್ನು ನಾವು ಋಗ್ವೇದದಲ್ಲೂ (ಮಂ.5, ಸೂ.16 ಮಂತ್ರ 17—19) ಕಾಣಬಹುದಾದರೂ ಕಾವ್ಯದೃಷ್ಟಿಯಿಂದ ಪರಿಗಣಿಸುವಾಗ ರಾಮಾಯಣ ಭಾರತಗಳಲ್ಲಿ ಬರುವ ಸಂದೇಶ ಪ್ರಕರಣವನ್ನೇ ದೂತಕಾವ್ಯಗಳ ಮೂಲವೆಂದು ಭಾವಿಸುವುದು ಉಚಿತ. ಆಂಜನೇಯ ರಾಮದೂತನಾಗಿ ದೂರದ ಲಂಕೆಯಲ್ಲಿದ್ದ ಸೀತೆಯಲ್ಲಿಗೆ ಹೋಗಿ ರಾಮನ ಸಂದೇಶವನ್ನೂ ಅಭಿಜ್ಞಾನವನ್ನೂ ಅವಳಿಗೆ ತಲಪಿಸಿ ಅವಳಿಂದ ರಾಮನಿಗೆ ಪ್ರತಿಸಂದೇಶವನ್ನೂ ಅಭಿಜ್ಞಾನವನ್ನೂ ತರುವ ಪ್ರಕರಣ ಕಾವ್ಯಾತ್ಮಕವಾಗಿರುವುದರಿಂದ ಅದು ಅನಂತರ ಕಾಲೀನ ಕವಿಗಳಿಗೆ ದೂತಕಾವ್ಯ ರಚಿಸಲು ಪ್ರಚೋದಕವಾಯಿತೆಂದು ಸಹಜವಾಗಿಯೇ ಹೇಳಬಹುದು. ಮಹಾಭಾರತದಲ್ಲಿ ಬರುವ ನಳ ದಮಯಂತೀ ಉಪಾಖ್ಯಾನದಲ್ಲಿನ ಹಂಸದ ದೌತ್ಯವೂ ಗಣನೀಯ. ಇಂಥ ಪ್ರಸಂಗಗಳು ಪುರಾಣಗಳಲ್ಲಿಯೂ ಹೇರಳವಾಗಿವೆ. ಆದರೆ ಅವು ಲಕ್ಷಣಬದ್ಧವಾದ ಕಾವ್ಯವೆನಿಸವು.

	ಈಗ ಉಪಲಬ್ಧವಾಗಿರುವ ಹಾಗೂ ಕಾವ್ಯಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ದೂತಕಾವ್ಯಗಳಲ್ಲಿ ಅತ್ಯಂತ ಪ್ರಾಚೀನವಾದುದು ಕಾಳಿದಾಸನ ಮೇಘದೂತ, ಇದನ್ನೇ ಮೇಘಸಂದೇಶವೆಂದೂ ಕರೆಯುತ್ತೇವೆ. ದಕ್ಷಿಣ ಭಾರತದ ರಾಮಗಿರಿಯಿಂದ ವಿರಹಿಯಾದ ಯಕ್ಷನೊಬ್ಬ ದೂರದ ಅಲಕಾವತಿಯಲ್ಲಿರುವ ತನ್ನ ರೂಪವತಿಯೂ ಯುವತಿಯೂ ಆದ ಪ್ರಿಯಪತ್ನಿಗೆ ಮೇಘವೊಂದರ ಮೂಲಕ ಸಂದೇಶವೊಂದನ್ನು ಹೇಳಿ ಕಳುಹಿಸುವಂತೆ ಪೂರ್ವ ಮೇಘ ಉತ್ತರಮೇಘಗಳೆಂಬ ಎರಡು ಸರ್ಗಗಳು ಈ ಚಿಕ್ಕ ಕಾವ್ಯದಲ್ಲಿ ನಿರೂಪಿತವಾಗಿವೆ. ಪೂರ್ವಮೇಘದಲ್ಲಿ ರಾಮ ಗಿರಿಯಿಂದ ಉತ್ತರದ ಅಲಕಾವತಿಗೆ ಮೇಘ ಹೋಗುವಾಗ ದಾರಿಯಲ್ಲಿ ಅದು ಕಾಣಬಹುದಾದ ನಗರಾದಿಗಳ ವರ್ಣನೆಯೂ ಉತ್ತರ ಮೇಘದಲ್ಲಿ ಅಲಕಾವತೀ ನಗರದ ಮತ್ತು ಅಲ್ಲಿಯ ಯಕ್ಷಗೃಹದ ವರ್ಣನೆಯೂ ಸಂದೇಶ ವಿಚಾರವೂ ಇದೆ. ವಿರಹಿಯ ಮನದಳಲನ್ನು ನಿರೂಪಿಸಲು ತಕ್ಕುದಾದ ಮಂದಾಕ್ರಾಂತಾವೃತ್ತದ ಈ ಕಾವ್ಯದಲ್ಲಿ ಕರುಣ ಮಿಶ್ರವಾದ ವಿಪ್ರಲಂಭ ಶೃಂಗಾರ ಹೃದಯುಗಮವಾಗಿ ಮೂಡಿಬಂದಿದೆ. ಈ ಕಾವ್ಯದ ರಚನೆಯಾದ ಮೇಲೆ ಅದರ ಅಪೂರ್ವವಸ್ತು. ಸುರುಚಿರ ನಿರ್ವಹಣೆ, ಸುಂದರಶೈಲಿ, ಶಬ್ಧ ಮಾಧುರ್ಯ, ರಸಮಯವರ್ಣನೆ, ವಿರಹಿಯ ಆಂತರಿಕ ಅಳಲಿನ ನಿರೂಪಣೆ-- ಇತ್ಯಾದಿ ಅನೇಕ ಅಂಶಗಳು ರಸಿಕರ ಮನಸ್ಸನ್ನು ಸೂರೆಗೊಂಡುವಲ್ಲದೆ ಇದೇ ರೀತಿಯ ದೂತಕಾವ್ಯಗಳ ರಚನೆಗೆ ಉತ್ತೇಜಕವಾದುವು. ಅದರ ಫಲವಾಗಿ ಅಂದಿನಿಂದ ಇಂದಿನವರೆಗೆ ನೂರಾರು ಸಂದೇಶ ಕಾವ್ಯಗಳ ರಚನೆಯಾಗುತ್ತಲೇ ಬಂದು ಸಂಸ್ಕøತಕಾವ್ಯಗಳಲ್ಲಿ ದೂತಕಾವ್ಯವೆಂಬ ಪ್ರತ್ಯೇಕ ಕಾವ್ಯಜಾತಿಯೇ ರೂಪಗೊಂಡಿದೆ.

	ಪ್ರಾಯಃ ಮೇಘದೂತ ಕಾಳಿದಾಸನ ಸಮಕಾಲೀನ ಪ್ರತಿಸ್ಫರ್ಧಿಯಾಗಿದ್ದ ಘಟಕರ್ಪರ ಕಾವ್ಯವೆಂಬ ಇಪ್ಪತ್ತೆರಡೇ ಶ್ಲೋಕಗಳ ಸಂದೇಶಕಾವ್ಯಕ್ಕೆ ಪ್ರತಿ ಸವಾಲಾಗಿ ರಚಿತವಾಗಿದ್ದರೂ ಇರಬಹುದು. ಕಾಳಿದಾಸನಿಂದೀಚೆಗೆ ಬೇರೆ ಬೇರೆ ದೂತಕಾವ್ಯಗಳೂ ಮೇಘದೂತದ ಅನುಕರಣಗಳೂ ಉದಯಿಸಿರಬೇಕೆನ್ನುವುದರಲ್ಲಿ ಸಂದೇಹವಿಲ್ಲದಿದ್ದರೂ ಕ್ರಿ.ಶ. ಎಂಟನೆಯ ಶತಮಾನದ ಅವಧಿಯೊಳಗೆ ರಚಿತವಾದ ದೂತಕ್ಯಾವೊಂದೂ ಈವರೆಗೆ ಸಿಕ್ಕಿಲ್ಲ. ಕ್ರಿ.ಶ. ಏಳು ಎಂಟನೆಯ ಶತಮಾನಗಳಲ್ಲಿ ಭವಭೂತಿ ರಚಿಸಿದ ಮಾಲತೀಮಾಧವದಲ್ಲಿ ವಿರಹಿಯಾದ ಮಾಧವನನ್ನು ಪ್ರೇಯಸಿಮಲ್ಲಿಗೆ ಮೇಘವೊಂದನ್ನು ದೂತನನ್ನಾಗಿ ಕಳುಹಿಸುವುದು ಕಾಳಿದಾಸನ ಮೇಘದೂತ ಕಾವ್ಯದ ಪ್ರಭಾವದ ದ್ಯೋತಕ. ಎಂಟನೆಯ ಶತಮಾನದಲ್ಲಿ ಜಿನಸೇನ ಮೇಘದೂತದ ಪದಗಳ ಮೇಲೆ ಸಮಸ್ಯಾಪೂರ್ತಿಮಾಡಿ ಪಾಶ್ರ್ವಾಭ್ಯುದಯವೆಂಬ ಕಾವ್ಯವನ್ನು ರಚಿಸಿದ. ಅದನ್ನು ನೋಡಿ ಜೈನಕವಿಗಳು ಮೇಘ ದೂತದ ಶ್ಲೋಕಗಳ ಪಾದಗಳನ್ನೆತ್ತಿಕೊಂಡು ಸಮಸ್ಯಾಪೂರ್ತಿಮಾಡಿ ಕಾವ್ಯರಚಿಸತೊಡಗಿದರು. ಈ ಬಗೆಯವು 14ನೆಯ ಶತಮಾನದ ವಿಕ್ರಮಕವಿಯ ನೇಮಿದೂತ, 15ನೆಯ ಶತಮಾನದ ಮೇರುತುಂಗನ ಜೈನ ಮೇಘದೂತ, ಚರಿತ್ರ ಸುಂದರಗಣಿಯ ಶೀಲದೂತ, 17ನೆಯ ಶತಮಾನದ ವಾದಿಚಂದ್ರನ ಪವನದೂತ, ಅಜ್ಞಾತ ಕವಿಯೊಬ್ಬನ ಚೇತೋದೂತ, ವಿನಯ ವಿಜಯಗಣಿಯ ಇಂದುದೂತ, ಮೇಘವಿಜಯನ ಮೇಘದೂತಸಮಸ್ಯಾಲೇಖ ಮುಂತಾದವು. ಇವೆಲ್ಲ ಜೈನ ಧರ್ಮದ ಹಿನ್ನೆಲೆಯಲ್ಲಿ ರಚಿತವಾಗಿರುವುದು ಸಹಜವಾಗಿಯೇ ಇದೆ. 20ನೆಯ ಶತಮಾನದಲ್ಲಿ ಸನಾತನ ಹಿಂದೂ ಧರ್ಮಾನುಯಾಯಿ ನಿತ್ಯಾನಂದ ಶಾಸ್ತ್ರಿಯಿಂದ ರಚಿತವಾದ ಹನುಮದ್ದೂತವೂ ಮೇಘದೂತದ ಶ್ಲೋಕಗಳ ಚತುರ್ಥ ಪಾದಗಳs ಸಮಸ್ಯಾಪೂರ್ತಿರೂಪದ್ದಾಗಿದೆ.

	ಧಾರ್ಮಿಕ ಹಿನ್ನೆಲೆಯಿಲ್ಲದೆ ಕೇವಲ ಕಾವ್ಯವಾಗಿಯೇ ರಚಿತವಾಗಿರುವ ದೂತ ಕಾವ್ಯಗಳು 12ನೆಯ ಶತಮಾನದ ಧೋಯಿಕವಿಯ ಪವನದೂತ, 15ನೆಯ ಶತಮಾನದ ಲಕ್ಷ್ಮೀ ದಾಸನ ಶುಕಸಂದೇಶ, ವಾಸುದೇವಕವಿಯ ಭೃಂಗಸಂದೇಶ, ಉದ್ದಂಡಕವಿಯ ಕೋಕಿಲಸಂದೇಶ, ಉದಯಕವಿಯ ಮಯೂರಸಂದೇಶ, ವಾಮನಭಟ್ಟ ಬಾಣನ ಹಂಸದೂತ, 16ನೆಯ ಶತಮಾನದ ವಿಷ್ಣುತ್ರಾತನ ಕೋಕಸಂದೇಶ ಮುಂತಾದವು.

	12ನೆಯ ಶತಮಾನದ ಪೂರ್ಣಸಾರಸ್ವತನ ಹಂಸಸಂದೇಶ, 15ನೆಯ ಶತಮಾನದ ವಿಷ್ಣುದಾಸನ ಮನೋದೂತ, 16ನೆಯ ಶತಮಾನದ ರೂಪಗೋಸ್ವಾಮಿಯ ಉದ್ಧವ ಸಂದೇಶ ಮತ್ತು ಹಂಸದೂತ, 17ನೆಯ ಶತಮಾನದ ಮಾಧವಕವೀಂದ್ರನ ಉದ್ಧವದೂತ, ರುದ್ರನ್ಯಾಯ ಪಂಚಾನನನ ಪಿಕದೂತ, 18ನೆಯ ಶತಮಾನದ ಶತಾವಧಾನ ಕವಿಯ ಭೃಂಗದೂತ, ಕೃಷ್ಣಸಾರ್ವಭೌಮನ ಪದಾಂಕದೂತ, ತೈಲಿಂಗ ವ್ರಜಾನಾಥನ ಮನೋದೂತ, 20ನೆಯ ಶತಮಾನದ ಭೋಲಾನಾಥನ ಪಾಂಥದೂತ - ಇವು ಶ್ರೀಕೃಷ್ಣಭಕ್ತಿಯ ಹಿನ್ನೆಲೆಯಲ್ಲಿ ರಚಿತವಾದ ದೂತ ಕಾವ್ಯಗಳು. ರಾಮಭಕ್ತಿಯ ಹಿನ್ನೆಲೆಯಲ್ಲಿ ರಚಿತವಾದುವು. 13ನೆಯ ಶತಮಾನದ ವೇದಾಂತದೇಶಿಕರ ಹಂಸಸಂದೇಶ, 17ನೆಯ ಶತಮಾನದ ರುದ್ರನ್ಯಾಯ ಪಂಚಾನನನ ಭ್ರಮರದೂತ, 18ನೆಯ ಶತಮಾನದ ಶ್ರೀಕೃಷ್ಣನ್ಯಾಯ ಪಂಚಾನನ ವಾತನ ದೂತ ಮುಂತಾದವು.(ಪ್ರಾಯಃ 15ನೆಯ ಶತಮಾನದ) ಅಜ್ಞಾತ ಕವಿಯೊಬ್ಬ ಶಿವಭಕ್ತಿಯ ಹಿನ್ನೆಲೆಯಲ್ಲಿ ಹಂಸ ಸಂದೇಶವೆಂಬ ದೂತಕಾವ್ಯವೊಂದನ್ನು ರಚಿಸಿದ್ದಾನೆ. ಪರಮೇಶ್ವರ ಝಾ ರಚಿತ ಯಕ್ಷ ಸಮಾಗಮ ಮತ್ತು ಮಂಡಿಕಲ್ ರಾಮಾಶಾಸ್ತ್ರಿ ವಿರಚಿತ ಮೇಘಪ್ರತಿ ಸಂದೇಶ - ಈ ಎರಡೂ ಕಾಳಿದಾಸನ ಮೇಘದೂತದ ವಸ್ತುವನ್ನೇ ಮುಂದುವರಿಸಿರುವ ಕ್ರಿ.ಶ. 20ನೆಯ ಶತಮಾನದ ದೂತಕಾವ್ಯಗಳು.

	ಈ ಎಲ್ಲ ಕಾವ್ಯಗಳಲ್ಲೂ ನಾವು ಕಾಣುವುದು ಪುಲ್ಲಿಂಗಶಬ್ದವಾಚ್ಯನಾದ ದೂತನನ್ನೇ. ಒಂದೆರಡು ಕಡೆ ಮನಃ ಚೇತಃ ಎಂಬ ನಪುಂಸಕಲಿಂಗ ಶಬ್ದ ವಾಚ್ಯನಾದ ದೂತನೂ ಉಂಟು. ಆದರೆ ಸ್ತ್ರೀಲಿಂಗ ವಾಚ್ಯದೂತ- ದೂತೀ ಎಲ್ಲೂ ಇಲ್ಲ. ಇದಕ್ಕೆ ಕಾರಣ ದೂರ ಪ್ರಯಾಣ ಕೈಗೊಂಡು ಸಂದೇಶಮುಟ್ಟಿಸುವ ಸಾಮಥ್ರ್ಯವನ್ನು ಸ್ತ್ರೀಯಿಂದ ನಿರೀಕ್ಷಿಸುವುದು ಅಸ್ವಾಭಾವಿಕವೆಂಬುದೇ ಇರಬೇಕು. ಭಾರತದ ನಾನಾಪ್ರಾಂತ್ಯಗಳಲ್ಲಿನ ಕವಿಗಳು ಈ ಕಾವ್ಯಗಳಲ್ಲಿ ದೂತನಿಗೆ ಮಾರ್ಗ ವಿವರಿಸುವ ವಾಜ್ಯದಿಂದ ಪೂರ್ವದಿಂದ ಪಶ್ಚಿಮಕ್ಕೂ ದಕ್ಷಿಣದಿಂದ ಉತ್ತರಕ್ಕೂ ಇನ್ನೂ ನಾನಾ ಕಡೆಗೆ ಹೋಗುವಾಗ ಮಾರ್ಗದಲ್ಲಿ ಸಿಗುವ ನದೀ ನಗರಾದಿಗಳನ್ನು ಸ್ಪಷ್ಟವಾಗಿ ರಮಣೀಯವಾಗಿ ವರ್ಣಿಸಿ ಭರತಖಂಡದ ಅಖಂಡತೆಯನ್ನು ಅನೇಕ ಸಾವಿರ ವರ್ಷಗಳಿಂದ ಸಾರುತ್ತ ಬಂದಿರುವುದು ಗಮನಾರ್ಹ.
(ಎಸ್.ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ